ಡೆವನ್
ನೈಋತ್ಯ ಇಂಗ್ಲೆಂಡಿನ ಒಂದು ಕೌಂಟಿ.  ಎಲ್ಲೆಗಳು ; ಉತ್ತರದಲ್ಲಿ ಬ್ರಿಸ್ಟಲ್  ಕಡಲ್ಗಾಲುವೆ, ದಕ್ಷಿಣದಲ್ಲಿ ಇಂಗ್ಲಿಷ್ ಕಡಲ್ಗಾಲುವೆ, ಪಶ್ಚಿಮದಲ್ಲಿ ಕಾರ್ನ್‍ವಾಲ್ ಕೌಂಟಿ, ಪೂರ್ವದಲ್ಲಿ  ಸಾಮರ್ಸೆಟ್ ಮತ್ತು ಡಾರ್ಸೆಟ್ ಕೌಂಟಿಗಳು.  ಬ್ರಿಸ್ಟಲ್ ಕಡಲ್ಗಾಲುವೆಯಲ್ಲಿರುವ ಲುಂಡಿ ದ್ವೀಪವೂ ಇದಕ್ಕೆ ಸೇರಿದೆ.  ವಿಸ್ತೀರ್ಣ 2,612.7 ಚ.ಮೈ. ಜನಸಂಖ್ಯೆ 8,22,906 (1961).  ಆಡಳಿತ ಕೇಂದ್ರ ಎಕ್ಸಿಟರ್. 

	ಡೆವನ್ ದಕ್ಷಿಣ ಇಂಗ್ಲೆಂಡಿನ ಬೆಟ್ಟಗುಡ್ಡಗಳ ನಾಡು.  ಸಮುದ್ರದಂಚಿನಲ್ಲಿ ಕಡಿದಾದ ಪ್ರಪಾತಗಳೂ ಬಳಸಾದ ಅಳಿವೆಗಳೂ ಇವೆ.  ಜಿಲ್ಲೆಯ ಮಧ್ಯಭಾಗ ಸಮುದ್ರಮಟ್ಟದಿಂದ 430' ಎತ್ತರದಲ್ಲಿದೆ.  ದಕ್ಷಿಣದಲ್ಲಿ ಅಭ್ರಕ ಶಿಲೆಯ ಬೆಟ್ಟಗಳಿವೆ.  ಅವುಗಳಲ್ಲಿ ವಿಲ್‍ಹೇಸ್‍ನ ಎತ್ತರ 2,039' ಯೆಸ್ಟರ್ 2,028' ಎತ್ತರವಾಗಿದೆ.  ಈಶಾನ್ಯದಲ್ಲಿ ಎಕ್ಸ್‍ಮೂರ್ ಬೆಟ್ಟಗಳಿವೆ.  ಕಡಲತೀರಗಳಲ್ಲಿ ಹಲವು ಬಂದರುಗಳಿವೆ.  ಇಂಗ್ಲಿಷ್ ಕಡಲ್ಗಾಲುವೆಯ ಭಾಗದ ರೇವುಗಳಲ್ಲಿ ಪ್ರಮುಖವಾದವು.  ಪ್ಲಿಮತ್, ಟಾಕ್ರ್ವೇ, ಬ್ರಿಕ್ಸ್‍ಹ್ಯಂ, ಬ್ರಿಸ್ಟಲ್ ಕಡಲ್ಗಾಲುವೆಯ ಕಡೆಯ ಮುಖ್ಯ ರೇವು ಬ್ಯಾರ್ನ್‍ಸ್ಟೇಪಲ್.  ಕೌಂಟಿಯ ಮುಖ್ಯ ನದಿಗಳು ಏಕ್ಸ್, ಡಾರ್ಟ್, ಪ್ಲಿಮ್, ಟ್ಯಾಮರ್ ಮತ್ತು ಟಾರಿಜ್.  ಡೆವನ್ ಕೌಂಟಿಯ ವಾಯುಗುಣ ಹಿತಕರವಾದ್ದು.  ಸರಾಸರಿ ವಾರ್ಷಿಕ ಮಳೆ ಡಾರ್ಟ್ ಮೂರ್ ಕಡೆ 80"; ಎಕ್ಸ್‍ಮೂರ್ ಕಡೆ 60"; ಎಕ್ಸ್ ನದಿ ಪ್ರದೇಶದಲ್ಲಿ 30".
ಜಿಲ್ಲೆಯ ಕಾಲು ಭಾಗ ಬಂಜರು ನೆಲ.  ಕುರುಚಲುವನ, ಹಾಗೂ ಹುಲ್ಲುಗಾಡುಗಳಿವೆ.  ಈ ಸಸ್ಯಗಳು ಪ್ರಧಾನವಾಗಿ ಡಾರ್ಟ್‍ಮೂರು ಮತ್ತು ಎಕ್ಸ್‍ಮೂರ್ ಭಾಗಗಳಲ್ಲಿವೆ.  ಉಳಿದ ಪ್ರದೇಶಗಳಲ್ಲಿ ವ್ಯವಸಾಯ ಹಾಗೂ ಪಶುಪಾಲನೆ ಸಾಗುತ್ತವೆ.  ಡಾರ್ಟ್‍ಮೂರ್ ಮತ್ತು ಎಕ್ಸ್‍ಮೂರ್ ಹುಲ್ಲುಗಾಡುಗಳಲ್ಲಿ ಕಾಡು ಕುದುರೆ, ನರಿ, ಮೊಲ, ಬುಜಾರ್ಡ್, ವ್ಯಾಗ್‍ಟೈಲ್ ಮೊದಲಾದ ಪಕ್ಷಿಗಳು ; ಓತಿ ಮತ್ತು ವಿವಿಧ ಬಗೆಯ ಹಾವುಗಳು ಇವೆ.  ನದಿಗಳಲ್ಲಿ ಟ್ರೌಟ್, ರೋಚ್, ಮೊದಲಾದ ಮೀನುಗಳಿವೆ. 

	ಜನರು ಬೇಸಾಯ, ಕೈಗಾರಿಕೆ ಹಾಗೂ ಹೈನುಗಾರಿಕೆಯಲ್ಲಿ ನಿರತರಾಗಿದ್ದಾರೆ.  ಮುಖ್ಯ ಬೆಳೆಗಳು ಓಟ್ಸ್, ಬಾರ್ಲಿ, ಗೋದಿ. ಇಲ್ಲಿ ಕಬ್ಬಿಣ, ತವರ, ತಾಮ್ರ, ಮ್ಯಾಂಗನೀಸ್, ಕವೋಲಿನ್, ಕಟ್ಟಡ ಶಿಲೆಗಳು, ಸ್ಲೇಟ್ ನಿಕ್ಷೇಪಗಳಿವೆ.  ಲೋಹದ ವಸ್ತುಗಳ ತಯಾರಿಕೆ, ಕಲ್ಲುಗಣಿಗಳಿಂದ ಕಲ್ಲು ತೆಗೆಯುವುದು ; ಹತ್ತಿ ಹಾಗೂ ಜವಳಿ ಮತ್ತು ಲೇಸ್ ತಯಾರಿಕೆ ಇವು ಮುಖ್ಯ ಕೈಗಾರಿಕೆಗಳು.  ಸಮುದ್ರ ತೀರದಲ್ಲಿ ಮೀನುಗಾರಿಕೆ ಒಂದು ಮುಖ್ಯ ಕಸಬು. 

ಇತಿಹಾಸ : ಪೂರ್ವಶಿಲಾಯುಗ ಮಾನವ ವಾಸಿಸುತ್ತಿದ್ದುದಕ್ಕೆ ಕುರುಹುಗಳು ದಕ್ಷಿಣ ಡೆವನ್ ಸುಣ್ಣಕಲ್ಲು ಗವಿಗಳಲ್ಲಿವೆ.   ನವಶಿಲಾಯುಗದ ಗೃಹವೊಂದು ಹಾಲ್ಡನ್ ಬಳಿ ದೊರಕಿದೆ.  ಡಾರ್ಟ್‍ಮೂರ್ ಪ್ರದೇಶದಲ್ಲಿ ಅನೇಕ ಪ್ರಾಗೈತಿಹಾಸಿಕ ಪಳೆಯುಳಿಕೆಗಳಿವೆ.  ಎಕ್ಸಿಟರ್ ಬಳಿ ರೋಮನರು ನಿರ್ಮಿಸಿದ ರಸ್ತೆಗಳು ಹಾಗೂ ಅವರ ಗ್ರಾಮಾಂತರ ಮಂದಿರಗಳಿವೆ.  ಮಾರ್ಟಿನ್‍ಹಾಕ್ ಬಳಿ ರೋಮನ್ ಕೋಟೆಯುಂಟು.  ಕ್ರಿ.ಶ. 7ನೆಯ ಶತಮಾನದಲ್ಲಿ ಸ್ಯಾಕ್ಸನ್ ಜನರ ಆಕ್ರಮಣಕ್ಕೆ ಈ ಪ್ರದೇಶ ಒಳಗಾಗಿತ್ತು.  ಈ ಜನರ ವಸತಿಗಳ ಪಳೆಯುಳಿಕೆಗಳಿವೆ.  851ರಿಂದ 1003ರ ವರೆಗೆ ಇದರ ಮೇಲೆ ಡೇನಿಷರು ದಾಳಿ ಮಾಡಿದರು.  1608ರಲ್ಲಿ ಎಕ್ಸಿಟರ್ 1ನೆಯ ವಿಲಿಯಮ್ ದೊರೆಯ ವಶವಾಗಿತ್ತು.  1348ರಲ್ಲಿ ಕಟ್ಟಿದ ಕೋಟೆ ಆ ನಗರಪ್ರದೇಶದಲ್ಲಿದೆ.  ಗುಲಾಬಿಗಳ ಯುದ್ಧಗಳಲ್ಲಿ ಹಾಗೂ 1ನೆಯ ಚಾಲ್ರ್ಸನ ಕಾಲದ ಅಂತರ್ಯುದ್ಧದ ಕಾಲದಲ್ಲಿ ಡೆವನ್ ಕೌಂಟಿಯ ಪ್ರದೇಶಗಳಲ್ಲಿ ಕದನಗಳು ನಡೆದುವು.  1ನೆಯ ಎಲಿಜಬೆತಳ ಕಾಲದಲ್ಲಿ (16ನೆಯ ಶತಮಾನ) ಕರಾವಳಿಯಲ್ಲಿ ಮೀನುಗಾರಿಕೆ ಅಭಿವೃದ್ಧಿ ಹೊಂದಿತು.  ಎರಡನೆಯ ಮಹಾ ಯುದ್ಧದಲ್ಲಿ (1939-45) ಡೆವನ್ ಕೌಂಟಿಯ ನಗರಗಳಿಗೆ ಜರ್ಮನ್ ವಿಮಾನ ದಾಳಿಯಿಂದ ನಷ್ಟವುಂಟಾಯಿತು.  ಆ ಯುದ್ಧದ ಕಾಲದಲ್ಲಿ ನಾರ್ಮಂಡಿ ಆಕ್ರಮಣಕ್ಕಾಗಿ ಜರ್ಮನಿಯ ಕಡೆಗೆ ಮಿತ್ರರಾಷ್ಟ್ರಗಳ ವಿಮಾನ ಹಾಗೂ ಸೈನ್ಯವನ್ನು ಹೊತ್ತ ನೌಕೆಗಳು ಇಲ್ಲಿಯ ಪ್ಲಿಮತ್ ರೇವಿನಿಂದ ಹೊರಟುವು.

	ಡೆವನ್ ಕೌಂಟಿಯ ಇಂಗ್ಲಿಷ್ ಕಡಲ್ಗಾಲುವೆ ತೀರದ ನಗರಗಳು ಪ್ರವಾಸಿ ಕೇಂದ್ರಗಳು, ಮನೋಹರವಾದ ಕಡಲಂಚು, ಪ್ರಾಗೈತಿಹಾಸಿಕ ಪಳೆಯುಳಿಕೆಗಳು.  ಪ್ರಾಚೀನ ರೋಮನ್ ಕಟ್ಟಡಗಳು, ಮಧ್ಯಯುಗದ ಕೋಟೆಗಳು-ಇವಕ್ಕೆ ಡೆವನ್ ಪ್ರಸಿದ್ಧ.
(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ